ಕ್ಯಾಂಪಿಯನ್, ಥಾಮಸ್	
1567-1619 ಆಂಗ್ಲಕವಿ ಮತ್ತು ಸಂಗೀತಗಾರ. ಎಸೆಕ್ಸಿನ ವಿಥಾಮ್‍ನಲ್ಲಿ ಹುಟ್ಟಿದ. ವ್ಯಾಸಂಗ ಕೇಂಬ್ರಿಜ್‍ನಲ್ಲಿ ನಡೆಯಿತು. ನ್ಯಾಯಶಾಸ್ತ್ರ ಮತ್ತು ವೈದ್ಯವಿಜ್ಞಾನಗಳನ್ನು ಅಭ್ಯಾಸಮಾಡಿದ ಈತ ಲಂಡನ್ನಿನಲ್ಲಿ ವೈದ್ಯನಾದ. ಸಂಗೀತದಲ್ಲಿ ಅಭಿರುಚಿ ಪರಿಶ್ರಮಗಳೆರಡೂ ಇದ್ದುದರಿಂದ ವಾದ್ಯಮೇಳಗಳೊಡನೆ ಹಾಡುವ ಲಘುಗೀತೆಗಳನ್ನು ರಚಿಸಿದುದಲ್ಲದೆ ಶ್ರೇಷ್ಠಮಟ್ಟದ ಮೊಗವಾಡ ನಾಟಕಗಳನ್ನು (ಮಾಸ್ಕ್) ರಚಿಸಿದ. ಈತನ ಕವನಗಳು ವಿವಿಧ ಛಂದೋವಿನ್ಯಾಸಗಳಿಂದ ಕೂಡಿದವಾಗಿ ಮೋಹಕತೆ ಸೂಕ್ಷ್ಮತೆಗಳಿಗೆ ಹೆಸರಾಗಿವೆ. 1595ರಲ್ಲಿ ನಾಟುನುಡಿ, ಶೋಕಗೀತೆ ಮತ್ತು ಇತರ ಕವನಗಳಿಂದ ಕೂಡಿದ ಲ್ಯಾಟಿನ್ ಕವನ ಸಂಕಲನವೊಂದನ್ನು ಪ್ರಕಟಿಸಿದ್ದಲ್ಲದೆ ರಾಜಸಭೆಯಲ್ಲಿ ಪ್ರದರ್ಶಿಸಲು ಕೆಲವು ಮೊಗವಾಡ ನಾಟಕಗಳನ್ನು ಬರೆದ. 1601 ರಿಂದ 1617ರ ವರೆಗೆ ಬರೆದ ಎ ಬುಕ್ ಆಫ್ ಏರ್ಸ್ ಎಂಬ ರಾಗರಚನೆ ಪಡೆದ ಗೀತೆಗಳು ನಾಲ್ಕು ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಪ್ರಾಸಬದ್ಧವಾದ ರಚನೆಗಳನ್ನು ಖಂಡಿಸಿ, ಅಬ್ಸರ್ವೇಷನ್ಸ್ ಆನ್ ದಿ ಆರ್ಟ್ ಆಫ್ ಇಂಗ್ಲಿಷ್ ಪೊಯಸಿ (1602) ಎಂಬ ಗ್ರಂಥದಲ್ಲಿ ಇಂಗ್ಲಿಷ್ ಕಾವ್ಯಕಲೆಯನ್ನು ಕುರಿತ ತನ್ನ ಅಭಿಪ್ರಾಯಗಳನ್ನು ತಿಳಿಸಿದ್ದಾನೆ. ಅಲ್ಲದೆ ಪ್ರಾಚೀನ ಛಂದೋರೀತಿಗಳನ್ನು ಆಧರಿಸಿ ಅಂತ್ಯಪ್ರಾಸವಿಲ್ಲದ ಕೆಲವು ಕವನಗಳನ್ನು ಕಟ್ಟಿದ್ದಾನೆ. ತನ್ನ ಅನೇಕ ಹಾಡುಗಳಿಗೆ ರಾಗರಚನೆ ಮಾಡಿ ರಾಗಕ್ಕೂ ಶಬ್ದಕ್ಕೂ ನಡುವೆ ಸಾಮರಸ್ಯ ತರಲು ಯತ್ನಿಸಿರುವುದಾಗಿ ಹೇಳಿಕೊಂಡಿದ್ದಾನೆ. ಈತನ ಗೀತೆಗಳು ಎಷ್ಟು ಸರಳವೋ ಅಷ್ಟೂ ಭಾವಪೂರ್ಣವಾಗಿದ್ದು ಬೆರಗುಗೊಳಿಸುವಂಥವು. ಅವುಗಳಲ್ಲಿ ದೇರ್ ಈಸ್ ಎ ಗಾರ್ಡನ್ ಇನ್ ಹರ್ ಫೇಸ್ ಎಂಬ ಗೀತೆ ಪ್ರಖ್ಯಾತವಾದುದು. ಈತನ ನಾಟಕಗಳಲ್ಲಿ ಶ್ರೇಷ್ಠವಾದ ಅನೇಕ ಗೀತೆಗಳಿವೆ. 											(ಎನ್.ಎಸ್.ಎಲ್.)

ಕ್ಯಾಂಪಿಯನ್ನನು, ತನ್ನ ಸಮಕಾಲೀನರಾಗಿದ್ದ ಫ್ರಾನ್ಸ್‍ನ ಪ್ಲಿವಡ್ ಗುಂಪಿನ ಸಂಗೀತಗಾರರಂತೆ, ಸಂಗೀತದ ಸಾಹಿತ್ಯದಲ್ಲಿ ಸರಳತೆ, ಸಹಜತೆಗಳನ್ನು ಪ್ರತಿಪಾದಿಸಿದ ಅಂದಿನ ಸಂಗೀತ ಕ್ಷೇತ್ರದಲ್ಲಿ ಇವನದು ದೊಡ್ಡ ಹೆಸರು. 		    (ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ